ಜಮ್ರ್ಯಾನಿಕ್ ಪುರಾಣ -
	ಆಂಗ್ಲೊ ಸ್ಯಾಕ್ಸನ್, ಜರ್ಮನ್ ಮತ್ತು ಸ್ಕ್ಯಾಂಡಿನೇವಿಯನ್ ಈ ಮೂರೂ ಜನಾಂಗಗಳ ಒಂದೇ ಮೂಲವುಳ್ಳಂತೆ ಕಾಣುವ ಪುರಾಣ ಮತ್ತು ವೀರೋಚಿತ ಸಾಹಿತ್ಯಗಳನಿಲ್ಲಿ ಜಮ್ರ್ಯಾನಿಕ್ ಪುರಾಣ ಎಂದು ಪರಿಗಣಿಸಲಾಗಿದೆ.

	ಜರ್ಮನ್ ದೇವರುಗಳ ಚರಿತೆ ಮತ್ತು ವಿಶ್ವರಚನಾಕ್ರಮಗಳು ಇಂಡೊ-ಯೂರೋಪಿಯನ್ನರ ಪುರಾಣಗಳ ಆಧಾರದಿಂದ ಬೆಳೆದುಬಂದಿದೆ. ಭಾರತೀಯ ಹಾಗೂ ಗ್ರೀಕ್ ಪುರಾಣಗಳಲ್ಲಿ ಕಂಡುಬರುವ ಅನೇಕ ವಿಷಯಗಳಿಗೂ ಜರ್ಮನ್ ಪುರಾಣದಲ್ಲಿ ಬರುವ ವಿಷಯ ಘಟನೆಗಳಿಗೂ ಹೋಲಿಕೆ ಇದೆ. ಈ ಪುರಾಣಕ್ಕೆ ಐಸ್‍ಲ್ಯಾಂಡಿನ ಪುರಾತನ ಪದ್ಯಗಳು ಮತ್ತು ಸ್ಕ್ಯಾಂಡಿನೇವಿಯ ಪುರಾಣ ಕಥೆಗಳು ಆಧಾರವಾಗಿವೆ.

	ವಿಶ್ವನಿಯಮ : ರೋಮ್ ಚರಿತ್ರೆಕಾರ ಟ್ಯಾಸಟಸ್ ಹೇಳುವಂತೆ ಜರ್ಮನರು ಟುಯಿಸ್ಟೊ ಎಂಬ ಭೂದೇವತೆಯನ್ನು ಆರಾಧಿಸುತ್ತಾರೆ. ಮಾನವ ಜನಾಂಗಕ್ಕೆ ಮೂಲಪುರುಷನೆಂದು ಕರೆಯುವ ಮನಸ್ ಈತನ ಮಗ. ನಾರ್ವೆಯ ಪುರಾಣದ ಪ್ರಕಾರ ವಿಶ್ವದ ಹುಟ್ಟಿಗೆ ಮೊದಲು ಈಮಿರ್ ಎಂಬ ದೈತ್ಯನ ಜನನವಾಗುತ್ತದೆ. ಈತನ ಬಗಲಿನಿಂದ ಒಬ್ಬ ಮಗನೂ ಒಬ್ಬ ಮಗಳೂ ಹುಟ್ಟುತ್ತಾರೆ. ಈತ ತನ್ನ ಪಾದಗಳನ್ನು ಪರಸ್ಪರ ಉಜ್ಜಿದಾಗ ಆರುತಲೆಯುಳ್ಳ ಒಬ್ಬ ದೈತ್ಯ ಹುಟ್ಟುತ್ತಾನೆ. ಅನಂತರ ಹಸು ಒಂದರಿಂದ ಇಬ್ಬರು ಸಹೋದರರೊಂದಿಗೆ ಓಡನ್ ದೇವತೆ ಹುಟ್ಟಿಬರುತ್ತಾನೆ. ಇವರು ಮೂವರೂ ಈಮಿರ್ ದೈತ್ಯನನ್ನು ಕೊಂದು ಅವನ ದೇಹದ ಮಾಂಸದಿಂದ ಭೂಮಿಯನ್ನು ಮೂಳೆಗಳಿಂದ ಪರ್ವತಗಳನ್ನೂ ತಲೆಬುರುಡೆಯಿಂದ ಆಕಾಶವನ್ನೂ ಅವನ ರಕ್ತದಿಂದ ಸಮುದ್ರವನ್ನೂ ಸೃಷ್ಟಿಸಿದರಂತೆ. ಈಮಿರನ ರಕ್ತ ಇಡೀ ವಿಶ್ವವನ್ನೇ ನುಂಗಿ ಪ್ರಳಯವನ್ನುಂಟು ಮಾಡಿದಾಗ ಎಲ್ಲ ದೈತ್ಯರೂ ಮಡಿದು ಒಬ್ಬ ಮಾತ್ರ ಉಳಿದುಕೊಂಡ ಎಂಬ ಐಸ್‍ಲ್ಯಾಂಡಿನ ಪುರಾತನ ಕವನಕಥೆ ಬೈಬಲ್ಲಿನ ಪ್ರಳಯಕಥೆಯನ್ನು ಹೋಲುತ್ತದೆ. ಓಡನ್ ಮತ್ತು ಅವನ ಸಹೋದರರು ಪ್ರಳಯದಲ್ಲಿ ಕೊಚ್ಚಿಬಂದ ಮರದ ಎರಡು ತುಂಡುಗಳಿಗೆ ಜೀವವಿತ್ತು ಮಾನವಕುಲದ ಪ್ರಥಮ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದರು.

	ಮಾನವ ಜೀವಿಸುತ್ತಿರುವ ಭೂಮಿಯನ್ನು ಸಮುದ್ರ ಸುತ್ತುವರಿದಿವೆ. ಈ ಸಮುದ್ರದಲ್ಲಿ ವಿಶ್ವಸರ್ಪ ತನ್ನ ಬಾಲವನ್ನು ತಾನೇ ಕಚ್ಚಿಕೊಂಡು ಮಲಗಿದೆ. ಈ ಸರ್ಪ ಆವರಿಸಿರುವ ಭಾಗವೇ ದೇವರಾಜ್ಯ. ಇಲ್ಲಿಗೂ ಸ್ವರ್ಗಕ್ಕೂ ಸಂಬಂಧ ಕಲ್ಪಿಸಿರುವ ಕಾಮನಬಿಲ್ಲಿನ ಮುಖಾಂತರ ದೇವತೆಗಳು ಇಲ್ಲಿಗೆ ಇಳಿದು ಬರುತ್ತಾರೆ. ಪೂರ್ವದ ಬಹುದೂರದಲ್ಲಿ ದೈತ್ಯರ ವಾಸಸ್ಥಾನವಿದೆ. ಸತ್ತವರ ಆತ್ಮಗಳು ತಂಗುವ ನಗರದ ಉತ್ತರದಲ್ಲಿ ಈ ದೈತ್ಯನಿವಾಸ ಇದೆಯೆಂದೂ ಒಂದು ಕಥೆ ಹೇಳುತ್ತದೆ. ಈ ದೈತ್ಯರು ಜಯದೇವತೆಯನ್ನು ಹಿಡಿಯಲು ಸದಾ ಪ್ರಯತ್ನಿಸುವ ಕಥೆ ಗ್ರೀಕ್ ಪುರಾಣ ಕಥೆಯಲ್ಲಿ ಬರುವ ಹೇಡೆಸ್ ಫರ್ಸೆಘೋನೆಯನ್ನು ಹಿಡಿಯುವ ಸಂಗತಿಯನ್ನು ಹೋಲುತ್ತದೆ. ಫುಲ್ಡಾದ ರುಡಾಲ್ಫ್‍ನ ಪ್ರಕಾರ (9ನೆಯ ಶತಮಾನ) ಸ್ಯಾಕ್ಸನ್ನರಿಗೆ ಪವಿತ್ರವಾದ, ಎಲ್ಲವನ್ನೂ ಭರಿಸುವ, ವಿಶ್ವಸ್ತಂಭ ಈ ಜಗತ್ತನ್ನು ಹೊತ್ತಿದೆ. ಸ್ವರ್ಗ ಧ್ರುವ ನಕ್ಷತ್ರದ ಆಧಾರದ ಮೇಲೆ ಚಲಿಸುತ್ತದೆ. ಜಗತ್ತಿಗೆ ಆಧಾರವಾಗಿರುವ ಮರದ ಕೆಳಗಡೆಯೇ ಮಾನವರ ಹಣೆಬರಹ (ವಿಧಿ) ನಿರ್ಧರಿತವಾಗುತ್ತಿದೆ. ಈ ಮಹಾವೃಕ್ಷದಿಂದ ಜೀವಧಾರಕ ಜೇನುಮಂಜು ಭೂಮಿಯ ಮೇಲೆ ಬೀಳುತ್ತದೆ. ಈ ಮರದ ಎಲೆಗಳನ್ನು ತಿನ್ನುವ ಆಡು ದೇವತೆಗಳಿಗೆ ಕುಡಿಯಲು ಜೇನಿನಂಥ ಮಧುರ ಹಾಲನ್ನು ಕೊಡುತ್ತದೆ. ರೆಕ್ಕೆಯುಳ್ಳ ಒಂದು ಭೂತಸರ್ಪ (ಡ್ರ್ಯಾಗನ್) ಬಂದು ಮರದ ಬೇರನ್ನು ಕಚ್ಚಿಹಾಕುತ್ತದೆ. ಈ ಮರದ ಮೇಲೆ ಕುಳಿತಿರುವ ಒಂದು ಹದ್ದಿಗೂ ಕೆಳಗಿರುವ ಭೂತಸರ್ಪಕ್ಕೂ ಮಧ್ಯೆ ಒಂದು ಅಳಿಲು ಓಡಾಡುತ್ತ ಅವುಗಳ ದ್ವೇಷ ಹೆಚ್ಚುವಂತೆ ಮಾಡುತ್ತದೆ.

	ನಾರ್ವೆಯ ಪುರಾಣ ಕಥೆಗಳ ಪ್ರಕಾರ-ಇಡೀ ಜೀವ ಜಗತ್ತು ದೈತ್ಯ ಚಳಿಗೆ ಸಿಕ್ಕಿ ಸಾಯುವುದು. ಒಬ್ಬ ಹೆಂಗಸು ಮಾತ್ರ ಒಂದು ಮರದ ಒಳಗೆ ಆಶ್ರಯ ಪಡೆದು ಬದುಕಿ ಉಳಿದು ಮುಂದಿನ ಮಾನವ ಜನಾಂಗದ ಮೂಲವಾಗುವರು. ದೇವತೆಗಳ ಅಂತ್ಯದೊಡನೆ ಜಗತ್ತಿನ ಅಂತ್ಯವಾಗುವುದು. ದುಷ್ಟಶಕ್ತಿಗಳ ಪ್ರತೀಕವಾಗಿ ಸರ್ಪ ಮತ್ತು ತೋಳ ಸೂರ್ಯನನ್ನು ನುಂಗುವುವು. ದುಷ್ಟಶಕ್ತಿಗಳು ದೇವತೆಗಳನ್ನೂ ಮಾನವರನ್ನೂ ಆಕ್ರಮಿಸುವುವು. ನಕ್ಷತ್ರಗಳು ಉದುರಿ ಹೋಗುವುವು. ಭೂಮಿ ಸಮುದ್ರದಲ್ಲಿ ಮುಳುಗಿ ಹೋಗುವುದು. ಬೆಂಕಿಯ ಜ್ವಾಲೆ ಆಕಾಶವನ್ನು ಮುಚ್ಚುವುದು. ಈ ಪ್ರಳಯದ ಅನಂತರ ಹೊಸಭೂಮಿ ಹುಟ್ಟುವುದು, ದೇವತೆಗಳು ಮರಳಿ ಬರುವರು. ಸುಖಸಂತೃಪ್ತಿ ನೆಲೆಸುವುದು. ಜಗತ್ತಿನ ಪ್ರಳಯ ಮತ್ತು ಅದರ ಮರುಹುಟ್ಟಿನ ಕಲ್ಪನೆ ದೇವರಲ್ಲಿ ನಂಬಿಕೆ ಇಡದ ಅನಾಗರಿಕ ಜರ್ಮನರಿಗೂ ತಿಳಿದಿತ್ತು. ಕ್ರೈಸ್ತಕವಿಗಳು ತಮ್ಮ ಕವನಗಳ ಮೂಲಕ ಅವುಗಳಲ್ಲಿ ನೈತಿಕತೆ ಮತ್ತು ಧಾರ್ಮಿಕತೆಯನ್ನು ತುಂಬಿದರು. ಉದಾಹರಣೆಗೆ ಒಂದು ಹಳೆಯ ಇಂಗ್ಲಿಷ್ ಮತ್ತು ಜರ್ಮನ್ ಕಾವ್ಯ ಮುಸ್‍ಪಿಲಿಯಲ್ಲಿ ಜಗತ್ತಿನ ಅಂತ್ಯದಲ್ಲಿ ಸಂತಏಲಿಯಾಸನನ್ನು ಒಬ್ಬ ಕ್ರೈಸ್ತವಿರೋಧಿ ಕೊಂದಾಗ ಜಗತ್ತು ಸಿಡಿದು ಬೆಂಕಿಯ ಪಾಲಾಗುವುದು-ಎಂದಿದೆ.

ದೇವತೆಗಳು : ಓಡನ್, ಟಿರ್, ಪೋರ್ ಮತ್ತು ಪ್ರಿಗ ಜಮ್ರ್ಯಾನಿಕ್ ಪುರಾಣಗಳಲ್ಲಿ ಕಾಣಬರುವ ನಾಲ್ಕು ಪ್ರಮುಖ ದೇವತೆಗಳು. ಟ್ಯಾಸಟಸ್ ಇವರನ್ನು ಕ್ರಮವಾಗಿ ಮಕ್ರ್ಯುರಿ, ಮಾರ್ಸ್, ಹರ್‍ಕ್ಯುಲಿಸ್ ಮತ್ತು ವೀನಸ್ ದೇವತೆಗಳಿಗೆ ಹೋಲಿಸುತ್ತಾನೆ.

	ಓಡನ್ ಪ್ರಮುಖ ದೈವ. ತನ್ನ ಒಂದೇ ಕಣ್ಣಿಂದ ಕುಳಿತಲ್ಲಿಂದಲೇ ಎಲ್ಲವನ್ನೂ ನೋಡುವಾತ. ವಿದ್ಯೆ ಮತ್ತು ಜ್ಞಾನಕ್ಕೆ ಅಧಿದೈವ. ಈತ ಮೃತರಿಗೆ ಮತ್ತೆ ಜೀವದಾನ ಮಾಡಬಲ್ಲ. ಯುದ್ಧದೇವನಾದ ಈತ ಕೋಪಗೊಂಡಾಗ ಮಾನವ ಉದ್ರಿಕ್ತನಾಗಿ ಕ್ರೂರನಾಗಿ, ವಚನತಪ್ಪಿ, ನೀತಿನಿಯಮವನ್ನು ಉಲ್ಲಂಘಿಸಿ ನಡೆಯುವಂತೆ ಪ್ರಚೋದನೆ ಮಾಡುವುದೂ ಉಂಟು.

	ಟಿರ್ ದೇವನ ಬಗ್ಗೆ ಹೆಚ್ಚು ತಿಳಿದು ಬಂದಿಲ್ಲವಾದರೂ ಈತ ಯುದ್ಧ ಮತ್ತು ನ್ಯಾಯಪಾಲನೆಗೆ ಸಂಬಂಧಿಸಿದ ಶಾಂತಿ ಸಂಧಾನಗಳ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದ. ನ್ಯಾಯಾಧಿಪತಿಯ ಗುರುತಾಗಿ ಈತನ ಕೈಯಲ್ಲಿ ಈಟಿ ಇರುತ್ತದೆ. ದೇವತೆಗಳು ದುಷ್ಟತೋಳವನ್ನು ಕಟ್ಟಿಹಾಕಲು ಸಹಾಯ ಮಾಡುವುದಕ್ಕಾಗಿ ತನ್ನ ಒಂದು ಕೈಯನ್ನು ತೋಳದ ತೆರೆದ ಬಾಯಿಗೆ ತುರುಕಿದುದರಿಂದ ಈ ದೇವತೆಗೆ ಒಂದೇ ಕೈಯಿದೆ.

	ಪೋರ್ ನಿಜಕ್ಕೂ ಸ್ಕ್ಯಾಂಡಿನೇವಿಯ ರೈತರ ಅಚ್ಚುಮೆಚ್ಚಿನ ದೇವರು. ಹರ್‍ಕ್ಯುಲಿಸ್ ಕೈಯಲ್ಲಿ ಸದಾ ಇರುವ ಬಡಿಗೆಯಂಥ ಆಯುಧ ಈ ದೇವನಕೈಯಲ್ಲೂ ಇದೆ. ಗಡ್ಡ ಕೆಂಪು. ಗುರುವಾರ ಈ ದೇವರ ವಾರ. ಶಕ್ತಿಯುತವಾದ ಈತ ಭೂಮಿಯನ್ನು ದೈತ್ಯರಿಂದ ಕಾಪಾಡಲು ಅವರೊಡನೆ ಕಾದಾಡುತ್ತಾನೆ. ದೈತ್ಯರಿಗೆ ಈತ ಸೋತಂದು ವಿಶ್ವಪ್ರಳಯವಾಗುತ್ತದೆ.

	ಫ್ರಿಗ ಓಡನ್ ದೇವನ ಹೆಂಡತಿ. ಆಸಿರ್ ಮತ್ತು ಬಾಲ್ಡರ್ ಮಕ್ಕಳು. ಈ ದೇವತೆಯ ಆರಾಧನೆ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. ತನ್ನ ಮಗನ ಪ್ರಾಣರಕ್ಷಣೆಗೆ ಈಕೆ ಎಲ್ಲ ಜೀವಿಗಳಿಂದ ವಾಗ್ದಾನ ಪಡೆದಳು. ಈ ದೇವತೆಯ ದಿನ ಶುಕ್ರವಾರ ಈ ದಿನವನ್ನು ವಿವಾಹಕ್ಕೆ ಶುಭವೆಂದು ಭಾವಿಸುತ್ತಾರೆ.

	ವ್ಯಾನಿರ್ ಎಂಬುವವರು ದೇವತೆಗಳ ಎರಡನೆ ಸಂತತಿಗೆ ಸೇರಿದ್ದಾರೆ. ಇವರು ಸಮೃದ್ಧಿ ಶಾಂತಿ ಮತ್ತು ಐಶ್ವರ್ಯಗಳ ಅಧಿದೇವತೆಗಳು. ಈ ಗುಂಪಿಗೆ ಸೇರಿದ ನರತುಸ್ ದೇವರನ್ನು ದಕ್ಷಿಣ ಬಾಲ್ಟಿಕ್ ತೀರದ ಜನ ಆರಾಧಿಸುತ್ತಾರೆ. ಫ್ರೇಯ ಜಗತ್ತಿನ ದೇವ. ಅಂದರೆ ನಾವೆಯ ಒಂದು ಪದ್ಯದ ಪ್ರಕಾರ ಈತ ಜಗತ್ತಿಗೆ ಸುಖ. ಶಾಂತಿದಾಯಕ. ಹಂದಿ ಈತನ ಮೆಚ್ಚಿನ ಪ್ರಾಣಿ. ಸೌಂದರ್ಯದೇವತೆ ಫ್ರಾಜû ಇವನ ತಂಗಿ. ಈ ದೇವತೆ ಈಜಿಪ್ಟಿನ ಐಸಿಸ್ ಮತ್ತು ಗ್ರೀಕನ ಆಪ್ರೊಡೈಟಿಯಂತೆ ತೀರಿಹೋದ ತನ್ನ ಪತಿಗಾಗಿ ದುಃಖಿಸುತ್ತ ಜಗತ್ತನೆಲ್ಲ ಸುತ್ತುವಳು. ಇವಳ ಕಣ್ಣಹನಿಗಳೇ ಸ್ವರ್ಣವಾಗಿ ಮಾರ್ಪಟ್ಟವು ಎನ್ನಲಾಗಿದೆ.

	ವ್ಯಾನಿರ್ ಮತ್ತು ಆಸಿರ್ ದೇವತೆಗಳ ಮಧ್ಯೆ ಯುದ್ಧವಾಗಿ ಕೊನೆಗೆ ಶಾಂತಿ ಸಂಧಾನದಿಂದ ಪರಸ್ಪರ ಒಟ್ಟುಗೂಡುವರು. ಓಡನ್, ಟಿರ್, ಪೋರ್ ಇವರು ಕ್ರಮವಾಗಿ ಪೂಜಾರಿ, ರಾಜ ಮತ್ತು ಯೋಧ ಇವರನ್ನು ಪ್ರತಿನಿಧಿಸುವಂತೆ ವ್ಯಾನಿರ್ ದೇವರುಗಳು ಸುಖ, ಶಾಂತಿಯನ್ನು ಪ್ರತಿನಿಧಿಸುವರು. ಇವರು ಒಟ್ಟುಗೂಡಿ ಪ್ರಾಣಿಗಳಿಗಿಂತ ಹೆಚ್ಚು ಬುದ್ಧಿವಂತನಾದ ಮಾನವನನ್ನು ಸೃಷ್ಟಿಸಿದರು.

	ದಕ್ಷಿಣ ಜಮ್ರ್ಯಾನಿಕ್ ಮತ್ತು ನಾರ್ವೆ ಪುರಾಣಗಳಲ್ಲಿ ಪರಸ್ಪರ ವ್ಯತ್ಯಾಸ ಉಂಟು. ಉದಾಹರಣೆಗೆ ದೇವತೆಗಳು ತಮ್ಮ ಯೌವನವನ್ನು ಕಾಪಾಡಿಕೊಳ್ಳಲು ತಿನ್ನುತ್ತಿದ್ದ ಸೇಬನ್ನು ರಕ್ಷಿಸುತ್ತಿದ್ದ ಇಡುನ್ ದೇವತೆ, ಓಡನ್ ದೇವನ ಸಹೋದರ ಲೊಕಿ, ಇವನ ಮಕ್ಕಳಾದ ವಿಶ್ವಸರ್ಪ, ಫೆನ್‍ರಿರ್ ತೋಳ ಮತ್ತು ಕೆಳಲೋಜದ ದೇವತೆ-ಇವೆಲ್ಲ ಜಮ್ರ್ಯಾನಿಕ್ ಪುರಾಣದಲ್ಲಿ ಕಾಣಬರದೆ ನಾರ್ವೆಯ ಕೃತಿಗಳಲ್ಲಿ ಮಾತ್ರ ಕಂಡುಬರುತ್ತವೆ.

	ವಿರೋಚಿತ ಪುರಾಣ ಕಥೆಗಳು : ಈ ಬಗೆಯ ಪುರಾಣ ಕಥೆಗಳು ಹಿಂದೆ ಕೆಲವರು ಹೇಳಿದ ಕಥೆಗಳೇ ಆಗಿದ್ದು ಕಾಲಕ್ಕೆ ತಕ್ಕಂತೆ ಬದಲಾಗುತ್ತ ಸಾಹಿತ್ಯದ ನಾನಾರೂಪಗಳಲ್ಲಿ ಕಾಣಿಸಿಕೊಂಡವು. ಇವು ಕಥೆ ಹೇಳುವ ವಿವಿಧ ಜನರ ಅಭಿರುಚಿ, ಅವರ ಸಂಸ್ಕøತಿ ಮುಂತಾದವುಗಳಿಂದ ಪ್ರಭಾವಿತವಾಗಿ ಯೂರೋಪಿಯನ್ನರ ಪಿತ್ರಾರ್ಜಿತ ಆಸ್ತಿಯಂತೆ, 9 ಅಥವಾ 10ನೆಯ ಶತಮಾನದ ಜರ್ಮನ್ ಮತ್ತು 13ನೆಯ ಶತಮಾನದ ಲ್ಯಾಟಿನ್ ಪುರಾಣ, ಕವಿತೆ ಮತ್ತು ಶಾಸನಗಳ ರೂಪದಲ್ಲೂ ಮತ್ತು ಐಸ್‍ಲ್ಯಾಂಡ್ ಮತ್ತು ನಾರ್ವೆಗಳಲ್ಲಿ ಗದ್ಯರೂಪದಲ್ಲೂ ಅನಂತರ ಜನಪದಗಳಲ್ಲೂ ಉಳಿದು ಬೆಳೆದು ಬಂದವು.

	ಪ್ರಮುಖ ಪುರಾಣಗಳಲ್ಲಿ ಎರಡು ವಿಧ. ಒಂದು ಐತಿಹಾಸಿಕ ವ್ಯಕ್ತಿ ಮತ್ತು ಘಟನೆಗಳಿಂದ ಕೂಡಿರುತ್ತದೆ. ಉದಾ : ಆಸ್ಟ್ರೋಗಾತ್‍ನ ಎರ್ಮನ್‍ರಿಕ್, ಹೂಣರ ಅಟಿಲ ಮತ್ತು ಚಕ್ರವರ್ತಿ ತಿಯೋಡೋರಿಕ್. ಎರಡನೆಯ ಕಾಲ್ಪನಿಕ ಪುರಾಣ ಮತ್ತು ಜನಪದ ಕತೆಗಳಿಂದ ಕೂಡಿದ್ದು. ಇದರಲ್ಲಿ ಅಮಾನುಷ ಶಕ್ತಿವಂತರು, ದೈತ್ಯಸಂಹಾರಕರು, ದುಷ್ಟರನ್ನು ಶಿಷ್ಟರನ್ನಾಗಿ ಮಾಡಿದವರು ಮೊದಲಾದವರ ಸುತ್ತ ಹೆಣೆದ ಕಥೆಗಳಿರುತ್ತವೆ.

	ಐತಿಹಾಸಿಕ ವ್ಯಕ್ತಿಗಳುಳ್ಳ ಜಮ್ರ್ಯಾನಿಕ್ ವೀರರ ಕತೆಗಳು ಕ್ರಿ. ಶ. 4-6ನೆಯ ಶತಮಾನಗಳಲ್ಲಿ ಆದಂಥ ಜಮ್ರ್ಯಾನಿಕ್ ವಲಸೆಯ ಕಾಲದ್ದು. ಜನರ ನೆನಪಿನಲ್ಲಿ ಉಳಿದ ಈ ಕಾಲದ ಘಟನೆಗಳು ಜಮ್ರ್ಯಾನಿಕ್ ಕವಿಗಳಿಗೆ ಮುಖ್ಯ ವಿಷಯಗಳಾದವು. ಇಲ್ಲಿ ಬರುವ ವೀರರು ತಮ್ಮ ನಾಡಿನಲ್ಲಿ ಅಲ್ಲದೆ ಜಮ್ರ್ಯಾನಿಕ್ ಭಾಷೆಯನ್ನಾಡುವ ಇತರ ವೀರರು ತಮ್ಮ ನಾಡಿನಲ್ಲಿ ಅಲ್ಲದೆ ಜಮ್ರ್ಯಾನಿಕ್ ಭಾಷೆಯನ್ನಾಡುವ ಇತರ ದೇಶಗಳಲ್ಲೂ ಪರಿಚಿತರಾದರು. ಕ್ರೈಸ್ತಮತ ಹರಡಿ ಬರಹ ಪ್ರಚಲಿತವಾಗುವವರೆಗೂ ಈ ಪುರಾಣ ಕಥೆಗಳೆಲ್ಲ ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾದ ಪದ್ಯರೂಪದಲ್ಲಿದ್ದು ಬಾಯಿಂದ ಬಾಯಿಗೆ ಪ್ರಸರವಾಗುತ್ತಿದ್ದುವು. ಜನ ಹಾರ್ಪ್‍ವಾದ್ಯದೊಡನೆ ಇವನ್ನು ಹಾಡಿ ದೇಶ ದೇಶಗಳಲ್ಲಿ ಪ್ರಚಾರಕ್ಕೆ ತಂದರು. ಕವಿಗಳಿಗೆ, ಪುರಾಣ ಕಥೆಗಳನ್ನು ಹಾಡುವವರಿಗೆ ರಾಜರೂ ಸಾಮಂತರೂ ತಮ್ಮ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ಪ್ರಭಾವಿತರಾದ ವಿದೇಶಿಯರು ತಮ್ಮ ದೇಶಗಳಿಗೂ ಈ ಕಥೆಗಳನ್ನು ಒಯ್ದರು. ಕೆಲವು ಕವಿಗಳು ತಮ್ಮ ಕೃತಿಗಳಿಗೆ ಈ ಪುರಾಣ ಕಥೆಗಳನ್ನು ಮೂಲವಾಗಿ ಬಳಸಿಕೊಂಡರು. ನಾರ್ವೆ, ಐಸ್‍ಲ್ಯಾಂಡ್ ಮತ್ತು ಗ್ರೀನ್‍ಲ್ಯಾಂಡ್ ದೇಶಗಳ ಕವಿಗಳು ದಕ್ಷಿಣ ಜರ್ಮನಿಯ ಕಥೆಗಳನ್ನೇ ಮತ್ತೆ ಮತ್ತೆ ಬಳಸಿಕೊಂಡು ಹಾಡಿದರು. 13ನೆಯ ಶತಮಾನದಲ್ಲಿ ಈ ಕಥೆಗಳನ್ನು ಐಸ್‍ಲ್ಯಾಂಡಿನಲ್ಲಿ ಬರೆದಿಡಲಾಯಿತು. ಈ ಕಥೆಗಳು ಕೆಲವು ವೇಳೆ ಕಥೆ ಹೇಳುವವರ ಸಹಾನುಭೂತಿಯ ಮೇಲೆ ವ್ಯತ್ಯಾಸವಾಗುತ್ತಿದ್ದವು. ಉದಾ: ಪೂರ್ವಜರ್ಮನಿಯಲ್ಲಿ ಅಟಿಲನನ್ನು ಪರಾಕ್ರಮಿ ಮತ್ತು ದಯಾಪೂರ್ಣ ಆಡಳಿತಗಾರನನ್ನಾಗಿ ಪರಿಗಣಿಸಿದರೆ ಪಶ್ಚಿಮದಲ್ಲಿ ಅವನೊಬ್ಬ ಧೂರ್ತ ಮತ್ತು ದಯಾಹೀನನೆಂದು ಬಣ್ಣಿಸಲಾಗಿದೆ.

	ಒಂದು ಐತಿಹಾಸಿಕ ಘಟನೆ ಯಾವ ರೀತಿ ಪುರಾಣ ಕಥೆಯಾಗಿ ಪದ್ಯರೂಪ ತಳೆಯಿತು ಎಂಬುದನ್ನು ನಿಖರವಾಗಿ ಹೇಳುವಂತಿಲ್ಲ. ಘಟನೆಗಳು ಕೆಲವು ತಲೆಮಾರುಗಳಲ್ಲಿ ಬದಲಾಗುತ್ತ ಒಬ್ಬರಿಂದ ಇನ್ನೊಬ್ಬರಿಗೆ ಸಾಗಿಬಂದವು. ಕೆಲವೊಂದು ವಿಷಯಗಳು ಬದಲಾಗದೆ ಉಳಿದರೂ ಗುಣ, ಉದ್ದೇಶ, ಸಂಭಾಷಣೆ ಮುಂತಾದವು ಕಥೆ ಹೇಳುವವನನ್ನು ಅವಲಂಬಿಸಿ ಬದಲಾಗುತ್ತ ಹೋದವು. ಕತೆ ಹೇಳುವವರು ಕತೆಗಳಲ್ಲಿ ಜಮ್ರ್ಯಾನಿಕ್ ಸಮಾಜದ ನ್ಯಾಯಪರತೆ, ಗೌರವ ಮತ್ತು ಅದರ ಹಿರಿಮೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತ ಬಂದರು.

	ಇದರಿಂದ ಈ ಪುರಾಣಕಥೆಗಳು ಐತಿಹಾಸಿಕ ಘಟನೆಗಳಿಗಿಂತಲೂ ಹೆಚ್ಚಾಗಿ ಕಥನ ಕಲೆಯನ್ನವಲಂಬಿಸಿ ವಿವಿಧವಾಗಿ ಬೆಳೆದುಬಂದವು. ಉದಾ: 4ನೆಯ ಶತಮಾನದ ಚರಿತ್ರಕಾರರ ಪ್ರಕಾರ ಎರ್ಮನ್‍ರಿಕ್ ಹೂಣರಿಂದ ಸೋಲದೆ ತಾನೇ ಆತ್ಮಹತ್ಯೆ ಮಾಡಿಕೊಂಡ ಎಂದೂ 6ನೆಯ ಶತಮಾನದ ಚರಿತ್ರಕಾರರ ಪ್ರಕಾರ ಸುನಿಲ್ದಳ ಗಂಡ ಎರ್ಮನ್‍ರಿಕ್‍ನನ್ನು ತೊರೆದುದರಿಂದ ಕೋಪಗೊಂಡ ಈತ ಸುನಿಲ್ದಳನ್ನು ಕಾಡು ಕುದುರೆಗಳ ಕಾಲಿಗೆ ಕಟ್ಟಿ ಕೊಲ್ಲುತ್ತಾನೆ. ಇದರಿಂದ ಕುಪಿತರಾದ ಸುನಿಲ್ದಳ ಸಹೋದರರು ಎರ್ಮನ್‍ರಿಕ್‍ನ ಮೇಲೆ ಕಾದಿ ಅವನನ್ನು ತೀವ್ರವಾಗಿ ಘಾಸಿಗೊಳಿಸುತ್ತಾರೆ. ಇದರಿಂದ ಮತ್ತು ಹೂಣರು ರಾಜ್ಯಕ್ಕೆ ನುಗ್ಗಿಬಂದದ್ದರಿಂದ ಎರ್ಮನ್‍ರಿಕ್ ಸತ್ತನೆಂದು ಹೇಳುತ್ತಾರೆ. ನಾರ್ವೆಯ ಕಾವ್ಯದಲ್ಲಿ ಎರ್ಮನ್‍ರಿಕ್‍ನ ದುರಂತ ಜೀವನವನ್ನು ಕಾಣಬಹುದು. ಇದರಂತೆ ಬರ್ಗಂಡಿಯ ಗುಂಡಿಕೇರಿಯಸ್ 437ರಲ್ಲಿ ಹೂಣರೊಂದಿಗೆ ಹೋರಾಡುತ್ತ ಮಡಿದ. ಅಟಿಲ 453ರಲ್ಲಿ ಹೆಚ್ಚು ಕುಡಿದು ಮೂಗಿನ ರಕ್ತಸ್ರಾವದಿಂದ ಸತ್ತ. ಇವರಿಬ್ಬರ ಸಾವನ್ನೂ ವಿರೋಚಿತವಾಗಿ ದುರಂತವಾಗಿ ಎಡ ಪುರಾಣ ಕಾವ್ಯದಲ್ಲಿ ಚಿತ್ರಿಸಿದೆ. ಅದರಂತೆ ಮುಚ್ಚಿಟ್ಟ ಸಂಪತ್ತನ್ನು ಗುನ್ನರ್ ತೋರಿಸಲಿಲ್ಲವೆಂದು ಅಟಿಲ ಕುಪಿತನಾಗಿ ಅವನನ್ನು ಸರ್ಪಗಳ ಗುಂಡಿಗೆ ನೂಕಿ ಸಾಯಿಸುತ್ತಾನೆ. ಅಟಿಲನ ಹೆಂಡತಿ ಗುನ್ನರ್‍ನ ಸಹೋದರಿ ತನ್ನ ಸಹೋದರನ ಸಾವಿನ ಸೇಡಿಗಾಗಿ ಅಟಿಲನ ಮಕ್ಕಳನ್ನು ಕೊಂದು ಅವನಿಗೇ ಉಣಬಡಿಸಿ, ಅಟಿಲ ಮಲಗಿದ್ದಾಗ ಅವನನ್ನು ಕೊಂದು ಮನೆಗೆ ಬೆಂಕಿ ಹಚ್ಚಿ ಸುಟ್ಟುಹಾಕುತ್ತಾಳೆ. ಮತ್ತೊಂದೆಡೆ ಗುನ್ನರ್‍ನ ಸಹೋದರಿ ಗುಡ್ರನ್ ತಾಯಿಯಾಗಿ, ಸಹೋದರಿಯಾಗಿ ಮತ್ತು ಪತ್ನಿಯಾಗಿ ನಾನಾ ಕಷ್ಟಗಳನ್ನು ಎದುರಿಸುವ ನಾಯಕಿಯಾಗಿ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ಕಥೆಗಳಲ್ಲಿ ವಿವಾಹ ಮತ್ತು ರಕ್ತಸಂಬಂಧಗಳನ್ನು ಉಲ್ಲಂಘಿಸಿ ಮಿತಿಮೀರಿ ವರ್ತಿಸಿದರಿಂದಾದ ಘರ್ಷಣೆ ಮತ್ತು ದುರಂತ ಫಲಗಳನ್ನು ಚಿತ್ರಿಸಲಾಗಿದೆ. ಉದ್ದಕ್ಕೂ ಈ ಪುರಾಣ ಕಥೆಗಳು ಬೆಳೆದುಕೊಂಡು ಹೋಗುವಂತೆ ಸಂಬಂಧ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಈ ಪುರಾಣ ಕಥೆಗಳಲ್ಲಿ ಕೆಟ್ಟದ್ದರಿಂದ ಒಳ್ಳೆಯದು ಸಿಗದು ಎಂಬ ನೀತಿಯ ಪ್ರತಿಪಾದನೆ ಇದೆ.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ